ಮೇ 4ಕ್ಕೆ ಬಿಜೆಪಿ ವಿಜಯೋತ್ಸವ!...ನಿರ್ಭೀತ ಮತದಾನ ಪ್ರಜಾಪ್ರಭುತ್ವದ ಗೆಲುವು ಎಂದ ಪ್ರಧಾನಿ ಮೋದಿ | Narendra Modi

 Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಲಖನೌ: ಬಂಗಾಳದ ಜನರು ಅತ್ಯಂತ ಉತ್ಸಾಹದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುತ್ತಿದ್ದು, ಕಳೆದ ಆರೇಳು ದಶಕಗಳಲ್ಲಿ ಕಾಣದಂತಹ ನಿರ್ಭೀತ ವಾತಾವರಣದಲ್ಲಿ ಜನರು ಇಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಬುಧವಾರ ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ಮಹತ್ವಾಕಾಂಕ್ಷೆಯ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ಮತದಾನವಲ್ಲ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯ ಸ್ಪಷ್ಟ ಸಂಕೇತವಾಗಿದ್ದು, ತಮ್ಮ ಹಕ್ಕುಗಳ ಬಗ್ಗೆ ಜಾಗರೂಕರಾಗಿರುವ ಮತ್ತು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಬಂಗಾಳದ ಜನರಿಗೆ ಇದೇ ವೇಳೆ ಪ್ರಧಾನಿ ಕೃತಜ್ಞತೆ ಸಲ್ಲಿಸುತ್ತಾ, ಉಳಿದ ಅವಧಿಯಲ್ಲೂ ಉತ್ಸಾಹದಿಂದ ಭಾಗವಹಿಸಲು ಕರೆ ನೀಡಿದರು.
ಬಿಹಾರ ವಿಧಾನಸಭಾ ಚುನಾವಣೆ ಮತ್ತು ಗುಜರಾತ್ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ವಿಜಯವನ್ನು ಮೆಲುಕು ಹಾಕಿದ ಪ್ರಧಾನಿ, ಪ್ರಸ್ತುತ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೇ 4 ರ ಫಲಿತಾಂಶಗಳು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸುತ್ತವೆ ಮತ್ತು ದೇಶದ ಪ್ರಗತಿಗೆ ಹೊಸ ಶಕ್ತಿ ತುಂಬಲಿವೆ ಎಂದು ಭರವಸೆ ನೀಡಿದರು.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮಹಿಳಾ ಮೀಸಲಾತಿ ಕಾನೂನಿಗೆ (ನಾರಿ ಶಕ್ತಿ ವಂದನ ತಿದ್ದುಪಡಿ) ಸಂಬಂಧಿಸಿದ ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಈ ಪಕ್ಷಗಳು ಮಹಿಳಾ ವಿರೋಧಿಗಳು ಎಂಬುದು ಸಾಬೀತಾಗಿದ್ದು, ಕೇಂದ್ರ ಸರ್ಕಾರ ತಂದ ಮಸೂದೆ ಅಂಗೀಕಾರವಾದರೆ 2029 ರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಲಿದೆ. ಆದರೆ ಸಮಾಜವಾದಿ ಪಕ್ಷವು ಇದರ ವಿರುದ್ಧ ಮತ ಚಲಾಯಿಸಿದೆ ಎಂದು ಕಿಡಿಕಾರಿದರು. ಸಮಾಜವಾದಿ ಪಕ್ಷವು ಅಭಿವೃದ್ಧಿ ಮತ್ತು ಮಹಿಳಾ ವಿರೋಧಿಯಾಗಿದೆ ಎಂದು ಟೀಕಿಸಿದ ಮೋದಿ, ಅಧಿಕಾರ ಕಳೆದುಕೊಂಡಿರುವ ಇವರು ರಾಜ್ಯವನ್ನು ಮತ್ತೆ ಹಳೆಯ ಹಾದಿಗೆ ತಳ್ಳಲು ಮತ್ತು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ವಿಶ್ವನಾಥನ ಸನ್ನಿಧಿಯಲ್ಲಿ ನಮೋ

ಇಂದು (ಬುಧವಾರ ಏ.29) ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ತಮ್ಮ ದಿನವನ್ನು ಆಧ್ಯಾತ್ಮಿಕವಾಗಿ ಆರಂಭಿಸಿದ ಪ್ರಧಾನಿ ಮೋದಿ, ದೇವಾಲಯದಲ್ಲಿ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಸಿ, ದೇಶದ ನಾಗರಿಕರ ಸುಖ, ಸಮೃದ್ಧಿ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ, ಪ್ರಧಾನಿ ಮೋದಿ, ಧಾರ್ಮಿಕ ಸಂಕೇತಗಳಾದ ತ್ರಿಶೂಲ ಮತ್ತು ಡಮರುವನ್ನು ಹಿಡಿದು ಭಕ್ತರ ಗಮನಸೆಳೆದರು. ಈ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅನ್ನಪೂರ್ಣ ಮತ್ತು ಗಂಗಾ ಮಾತೆಯ ದರ್ಶನವು ತಮಗೆ ಅಪಾರ ಶಾಂತಿ ನೀಡಿದೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net